ಮಾರಮ್ಮ
ಸಾಮಾನ್ಯವಾಗಿ ಕರ್ನಾಟಕದ ಎಲ್ಲ ಗ್ರಾಮ ಹಾಗೂ ಊರುಗಳಲ್ಲಿ ಕಾಣಬರುವ ಶಕ್ತಿದೇವತೆಯ ಅವತಾರ ಎಂದು ನಂಬಲಾದ ಒಬ್ಬ ಗ್ರಾಮದೇವತೆ. ಗ್ರಾಮದ ಹೊರಗೆ ನೆಲಸಿರುವ ಈ ದೇವತೆ ಆ ಗ್ರಾಮಕ್ಕೆ ಒದಗುವ ಕೆಡಕುಗಳು, ಈತಿಬಾಧೆಗಳು, ಸಾಂಕ್ರಾಮಿಕ ಜಾಡ್ಯಗಳು ಮುಂತಾದವನ್ನು ಪರಿಹರಿಸಿ ಗ್ರಾಮದಲ್ಲಿ ಶಾಂತಿ ನೆಮ್ಮದಿ ನೆಲಸುವಂತೆ ಮಾಡುವಳೆಂಬ ನಂಬಿಕೆ ಜನರಲ್ಲಿದೆ. ಈಕೆ ಮುನಿದರೆ ಗ್ರಾಮಕ್ಕೆ ಕೇಡೆಂದು ತಿಳಿದ ಜನ ಈಕೆಯನ್ನು ಪ್ರಸನ್ನಳಾಗಿಸಲು ವರ್ಷಕ್ಕೊಮ್ಮೆ ಜಾತ್ರೆಮಾಡಿ ಸಂತೃಪ್ತಿಗಾಗಿ ಕುರಿಕೋಳಿ ಕೋಣಗಳ ಬಲಿ ಕೊಡುವ ಸಂಪ್ರದಾಯದವಿದೆ. ಕಾನೂನಿನ ಅಡಚಣೆಯಿಂದಾಗಿ ಬಲಿಕೊಡುವುದು ಇತ್ತೀಚೆಗೆ ಕಡಿಮೆಯಾಗುತ್ತಿದೆ.

ಉರಿಮಾರಿ, ಊರುಮಾರಿ, ಮೂಗುಮಾರಿ, ದೊಡ್ಡಮಾರಿ, ಒಳ್ಳೆಮಾರಿ, ದೊಂಬರಮಾರಿ ಇತ್ಯಾದಿ ಭಿನ್ನ ರೂಪಗಳಲ್ಲಿಯೂ ಈ ದೇವತೆ ಪೂಜೆಗೊಳ್ಳುವುದುಂಟು. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಪ್ರಚಲಿತವಿರುವ ಹುಲಿಗ್ಯವ್ವ ಕೂಡ ಶಕ್ತಿದೇವತೆಯಾದುದರಿಂದ ಮಾರಮ್ಮನ ಬಗ್ಗೆ ಇರುವ ನಂಬಿಕೆಗಳೇ ಈ ದೇವತೆಯ ಬಗ್ಗೆಯೂ ಪ್ರಚಲಿತವಿದೆ.

ಮಾರಿ ಎಂಬ ಶಬ್ದ ನಿಷ್ಪತ್ತಿಯ ಬಗ್ಗೆ ಅನೇಕ ಚರ್ಚೆಗಳು ನಡೆದಿವೆ. ಮಹೇಶ್ವರಿ ಎಂಬುದೇ ಮಾರಿ ಆಗಿದೆ ಎಂಬುದು ಒಂದು ವಾದ. ಈಕೆ ಶಕ್ತಿ ದೇವತೆಯಾದುದರಿಂದ, ದೇವಾನುದೇವತೆಗಳ ಎಲ್ಲ ರೀತಿಯ ಆಯುಧಗಳಿಂದಲೂ ಶಕ್ತಿಯಿಂದಲೂ ರೌದ್ರಾವತಾರ ಪಡೆದು ಮಹಿಷಾಸುರನನ್ನು ಕೊಂದು ಚಾಮುಂಡೇಶ್ವರಿಯಾದ ಇವಳನ್ನು ಮಹಾವೀರಿ ಎಂದು ಪರಿಗಣಿಸಿ ಆದರಿಂದಲೇ ಮಾರಿ ಶಬ್ದದ ನಿಷ್ಪತ್ತಿಯಾಗಿದೆ ಎಂಬುದು ಇನ್ನೊಂದು ವಾದ. ಕೊಳ್ಳೇಗಾಲ ತಾಲ್ಲೂಕಿನಲ್ಲಿ ಸಂಗ್ರಹವಾಗಿ ಇರುವ ಒಂದು ಕಥೆಯ ಪ್ರಕಾರ ಮರದೇವತೆ, ಮರಮ್ಮ ಎಂಬುದರಿಂದ ಮಾರಮ್ಮ ಎಂದಾಗಿದೆ ಎಂಬ ಮಾತು ಇದೆ.
ಮಾರಮ್ಮನ ವಿಗ್ರಹದಲ್ಲಿ ರುಂಡದ ಭಾಗ ಮಾತ್ರ ಕಾಣಬರುವುದಕ್ಕೆ ಒಂದು ಕಥೆ ಹೀಗಿದೆ:

ಪರಶುರಾಮ ತಂದೆಯಿಂದ ಅಜ್ಞಪ್ತನಾಗಿ ತಾಯಿಯನ್ನು ಕೊಲ್ಲಲು ಸಿದ್ಧನಾದಾಗ ಮಗನ ಪಿತೃಭಕ್ತಿಯನ್ನು ಅರಿತಿದ್ದ ರೇಣುಕಾದೇವಿ ಈತ ಇತರ ಮಕ್ಕಳಂತಲ್ಲದೆ ತನ್ನನ್ನು ಕೊಂದೇಬಿಡುತ್ತಾನೆಂದು ನಂಬುತ್ತಾಳೆ. ಆಗ ಈತನ ಮನಸ್ಸನ್ನು ಕರುಣರಸದ ಕಡೆಗೆ ಒಯ್ಯಲು ಯತ್ನಿಸುತ್ತಾಳೆ. ಇಲ್ಲಿ ಪರಶುರಾಮ ಬಳಸುವುದು ಗಂಡುಗ-ಲಿಯಲ್ಲ, ಇಬ್ಬಾಯಿಕತ್ತಿ. ಎರಡು ಅಂಚಿನ ಅಲಗಿನಿಂದ ಕತ್ತರಿಸಬಹುದಾದಂಥ ಕತ್ತಿ ಹಿಡಿದು ನಿಂತ ಮಗನನ್ನು ಪರಿಪರಿಯಾಗಿ ಹಾಗೆ ಮಾಡಬೇಡವೆಂದು ಕೇಳಿಕೊಂಡರೂ ಆತ ಒಪ್ಪುವುದಿಲ್ಲ. ಕೊನೆಯ ಅಸ್ತ್ರವಾಗಿ ರೇಣುಕಾದೇವಿ, `ಲೋ, ಮಗು, ನಾನು ನಿನ್ನನ್ನು ಹೆತ್ತವಳು ನಿನ್ನ ಅಮ್ಮ ಕಣೋ ಎಂದು ಹೇಳಿದಾಗ ಎಲ್ಲಿ ತನ್ನನ್ನು ವಿಚಲಿತನನ್ನಾಗಿ ಮಾಡಿಬಿಡುತ್ತಾಳೋ ಎಂದು ಭಾವಿಸಿ ಅಮ್ಮ? ಎಲ್ಲಿ ಅಮ್ಮ? ಎಂದು ರೇಗಿ ಕಚಕ್ಕನೆ ತಾಯಿಯ ಶಿರವನ್ನು ಕತ್ತರಿಸುತ್ತಾನೆ. ಈ ಅಘಾತದಿಂದ ಆತ ಎಚ್ಚೆತ್ತುಕೊಳ್ಳುವ ಮೊದಲೇ ಇಲ್ಲಿ ಅಮ್ಮ ಎಂಬ ಕೂಗು ಕೇಳಿಸುತ್ತದೆ. ನೋಡುತ್ತಾನೆ, ಅಮ್ಮ ನಗುತ್ತ ನಿಂತಿದ್ದಾಳೆ, ಒಂದು ತಲೆ ಕೆಳಗೆ ಬಿದ್ದಿದೆ. ಕತ್ತಿಯನ್ನು ಮತ್ತೆ ಹಿಂದಕ್ಕೆ ಮುಂದಕ್ಕೆ ಬೀಸುತ್ತಾನೆ ಎಲ್ಲಿ ಅಮ್ಮ? ಎಂದು ಅಬ್ಬರಿಸುತ್ತ. ಎರಡುಸಲಕ್ಕೆ ಎರಡು ತಲೆಗಳು ಉರುಳುತ್ತವೆ. ಮತ್ತೆ ತಿರುಗಿನೋಡುತ್ತಾನೆ, ಇಲ್ಲಿ ಅಮ್ಮ ಎಂದು ಹೇಳುತ್ತ ರೇಣುಕಾದೇವಿ ನಗುತ್ತ ನಿಂತಿದ್ದಾಳೆ. ಪರಶುರಾಮನಿಗೆ ಪಿತ್ತ ನೆತ್ತಿಗೇರುತ್ತದೆ. ತಂದೆಯ ಆಜ್ಞೆಯನ್ನು ಪಾಲಿಸಲು ಆಗುತ್ತಿಲ್ಲವಲ್ಲ ಎಂಬ ಸಂಕಟಬೇರೆ. ಎಲ್ಲಿ ಅಮ್ಮ? ಅಮ್ಮ ಎಲ್ಲಿ? ಎಲ್ಲಿ ಅಮ್ಮ? ಎಂದು ಹೇಳುತ್ತ ಕತ್ತಿಯನ್ನು ಎರಡೂ ದಿಕ್ಕಿನಲ್ಲಿ ಬೀಸತೊಡಗುತ್ತಾನೆ. ಆ ಇಬ್ಬಾಯಿ ಕತ್ತಿ, ಹೋಗುತ್ತ ಒಂದು ಬರುತ್ತ ಒಂದು, ಹೀಗೆ ಎರಡೂ ಅಲಗಿನಿಂದ ತಲೆಗಳು ಉರುಳುತ್ತವೆ. ಹೀಗೆ ನೂರಾರು ತಲೆಗಳು ಉರುಳಿ ರಾಶಿಯಾಗುತ್ತದೆ. ಸಾಕ್ಷಾತ್ ಆದಿಶಕ್ತಿ ಎನಿಸಿದ ರೇಣುಕಾದೇವಿಯ ತಲೆಗಳೇ ಅವೆಂದು ತಿಳಿದು ಪರಶುರಾಮ ಆ ತಲೆಗಳು ಪ್ರತಿಯೊಂದು ಹಳ್ಳಿಗೂ ಹೋಗಿ ನೆಲಸಿ ಪೂಜೆಗೊಳ್ಳುವಂತೆ ವರ ನೀಡುತ್ತಾನೆ. ಆ ತಲೆಗಳೇ ಇಂದು ಎಲ್ಲೆಲ್ಲೂ ಪೂಜೆಗೊಳ್ಳುತ್ತಿರುವ ಮಾರಮ್ಮ ಎಂಬ ಅಭಿದಾನಿ ಪಡೆದ ಗ್ರಾಮದೇವತೆಗಳು.

ಬ್ರಾಹ್ಮಣ ಕನ್ಯೆಯಾದ ಮಾರಮ್ಮ ಮೋಸಹೋಗಿ ಕೀಳುಜಾತಿಯವನೊಬ್ಬನನ್ನು ಮದುವೆಯಾಗಿ ನಿಜಸಂಗತಿ ತಿಳಿದಾಗ ಗಂಡನನ್ನು ಹೊರಹಾಕಿದಳೆಂದು ಹೇಳುವ ಒಂದು ಕಥೆ ಹೀಗಿದೆ:

ಕೆರೆಯ ಏರಿಯ ಮೇಲಿನ ಹೊಂಗೆಯ ಮರ ಏರಿ ಕುಳಿತಿದ್ದ ತಲಪಟ್ಟರಾಯ ಎಂಬ ಅಸ್ಪøಶ್ಯ ಹೈದನೊಬ್ಬ ನೀರು ಮೊಗೆಯಲು ಬಂದ. ಹಾರವರ ಮಗಳು ಮಾರಮ್ಮನನ್ನು ಕಂಡು ಮೋಹಿತನಾದ. ಏನಾದರೂ ಮಾಡಿ ಮಾರಮ್ಮನನ್ನು ಮದುವೆಯಾಗಬೇಕೆಂದು ಮನಸ್ಸು ಮಾಡಿದ. ಆ ಹೈದ ನಡೆನುಡಿಯಲ್ಲಿ ಬ್ರಾಹ್ಮಣಿಕೆಯನ್ನು ರೂಢಿಸಿಕೊಂಡು ಮಾರಮ್ಮನ ತಂದೆಯನ್ನು ಮರುಳುಮಾಡಿ ಮದುವೆಗೆ ಒಪ್ಪಿಸಿದ. ಮಾರಮ್ಮನಿಗೂ ತಲಪಟ್ಟರಾಯನಿಗೂ ಮದುವೆ ಆಯಿತು.

ಮಾರಮ್ಮ ದಿನಕ್ಕೊಂದು ಬಗೆಯ ಅಡುಗೆ ಮಾಡಿ ಇಕ್ಕುತ್ತಿದ್ದಳು. ತಲಪಟ್ಟರಾಯ ಉಂಡು ಸುಖವಾಗಿದ್ದ, ಒಂದು ದಿನ ಮಾರಮ್ಮ ನಾಮದಲಗೆ ಎಂಬ ಸಿಹಿ ತಿಂಡಿ ಮಾಡಿದಳು. ಅದನ್ನು ಕಂಡು ಇದು ಎಂಥ ತಿಂಡಿ ಎಂದು ಕೇಳಿದ. ನಾಮದಲಗೆ ಎಂದಳು. ಎಂಥಾ ಹಲಗೆ ತಿಂದರೇನು, ಕೋಣನ ನಾಲಗೆ ತಿಂದಂಗಾದಾತಾ? ಎಂದ. ಆಕೆಗೆ ಸಂಶಯ ಬಂದು ಈತ ಬ್ರಾಹ್ಮಣನೋ ಅಲ್ಲವೋ ಎಂದು ತಿಳಿಯುವ ಸಲುವಾಗಿ ಒಂದು ಉಪಾಯ ಹೂಡಿದಳು. ಗಂಡನ ಕೈಗೆ ಒಂದು ಕಾಸು ಕೊಟ್ಟು ಅದರಲ್ಲಿ ಎಲೆ ಕಾಳು ಹೂವು ಎಣ್ಣೆ ಸೌದೆ ಕೊಂಡುಕೊಂಡು ಕಾಸನ್ನೂ ಹಿಂದಕ್ಕೆ ತರುವಂತೆ ಹೇಳಿದಳು. ಅದು ಅವನಿಂದ ಸಾಧ್ಯವಾಗಲಿಲ್ಲ. ಆಗ ಆಕೆ ನೀನು ಬ್ರಾಹ್ಮಣನಲ್ಲ ಎಂದಳು. ಹೇಗೆ ಎಂದ, ನೀನು ಬ್ರಾಹ್ಮಣನೇ ಆಗಿದ್ದರೆ ಆ ಎಲ್ಲಾ ವಸ್ತುಗಳಿರುವ ಒಂದು ಎಳ್ಳಿನ ಗಿಡವನ್ನು ತರುತ್ತಿದ್ದೆ. ನೀನು ಬ್ರಾಹ್ಮಣನಲ್ಲ, ಮನೆಯೊಳಗೆ ಬರಬೇಡ ಎಂದು ಹೇಳಿ ಅವನನ್ನು ಹೊರಗೆ ಅಟ್ಟಿ ಕದ ಹಾಕಿಕೊಂಡಳು.

ಮನೆಯಾಚೆ ಕುಳಿತ ತಲಪಟ್ಟರಾಯ ಮಾರಮ್ಮ ಮತ್ತೆ ಕದ ತೆರೆಯಬಹುದು ಎಂದು ಕಾದ. ಕಾಯುತ್ತ ಕುಳಿತೇಬಿಟ್ಟ. ವಿಷಯ ತಿಳಿದ ಅವನ ತಾಯಿ ಬಂದು ನೋಡಿದಳು. ಮಗನ ತಲೆ ಬಿಸಿಲಿನ ಝಳದಲ್ಲಿ ಬೇಯುತ್ತಿದ್ದುದನ್ನು ಕಂಡು ಕೈಯೆಣ್ಣೆ ತಂದು ತಲೆಗೆ ಒತ್ತಿದಳು. ಕದ ತೆರೆಯುವಳೆಂದು ಕಾದು ಕಾದು ಸಾಕಾಗಿ ಕೋಪಗೊಂಡ ತಲಪಟ್ಟರಾಯ ಎಮ್ಮೆ ಕೋಣ ಕುರಿ ಕೋಳಿ ಮುಂತಾದ ಪ್ರಾಣಿಗಳನ್ನು ಹಿಡಿದು ತಂದು ಮಾರಮ್ಮನ ಮನೆಯ ಮುಂದೆ ಕತ್ತರಿಸಿ ಎಸೆಯತೊಡಗಿದ. ಅವನು ಏನು ಮಾಡುತ್ತಿದ್ದಾನೆ ಎಂದು ನೋಡಲು ಇಣಿಕಿ ನೋಡಿದಾಗ ಮಾರಮ್ಮನ ಹಣೆಗೆ ಕೋಣನ ರಕ್ತ ಹಾರಿತು. ಆಗ ಕೋಪಗೊಂಡ ಮಾರಮ್ಮ "ಕಲ್ಲಾಗಿ ಹೋಗು" ಎಂದು ಶಾಪ ಕೊಟ್ಟಳು.

ಪ್ರತಿ ಮಾರಮ್ಮನ ಗುಡಿ ಮುಂದೆ ಮೋಟಾದ ಒಂದು ಕಲ್ಲುಕಂಬ ಕಾಣಬಹುದು (ಇದನ್ನು ಬಿಸಿಲುಮಾರಿ ಎಂದೂ ಕರೆಯುವುದುಂಟು). ಮಾರಿಗುಡಿಯ ಮುಂದೆ ಪ್ರಾಣಿಗಳನ್ನು ಬಲಿಕೊಡುವ ಜನ ಆ ಕಂಬದ ನೆತ್ತಿಗೆ ಎಣ್ಣೆ ಸುರಿಯುವುದು ರೂಢಿಯಲ್ಲಿದೆ. ಮಾರಮ್ಮನಿಗೆ ಗಂಡ ಇಲ್ಲ, ತಲಪಟ್ರಾಯ್ನಿಗೆ ಹೆಂಡ್ರಿಲ್ಲ ಎಂಬ ಮಾತು ಗಾದೆಯ ಮಾತಾಗಿದೆ. ಇದೇ ಮಾತು `ಮಾರಮ್ಮನಿಗೆ ಗಂಡ ಇಲ್ಲ, ಬೋರೆದೇವರಿಗೆ ಹೆಂಡ್ರಿಲ್ಲ ಎಂದೂ ಬಳಕೆಯಲ್ಲಿದೆ (ಮಾರಮ್ಮನ ಗುಡಿ ಸಮೀಪದಲ್ಲೇ ಬೋರೆದೇವರಗುಡಿ ಇರುವುದನ್ನು ಅಲ್ಲಲ್ಲಿ ಕಾಣಬಹುದು).

ಮಾರಮ್ಮನನ್ನು ಮಕ್ಕಳ ತಾಯಿ ಮಾರಮ್ಮ ಎಂದೂ ಕರೆಯುವುದುಂಟು. ಪ್ರತಿವರ್ಷ ನಡೆಯುವ ಗ್ರಾಮದೇವತೆ ಜಾತ್ರೆಯಲ್ಲಿ ಮಾರಮ್ಮನಿಗೆ ತಂಪು ಕೊಡುವುದು ಅಲ್ಲಲ್ಲಿ ಬಳಕೆಯಲ್ಲಿದೆ. ತಂಬಿಟ್ಟು ನೆನಕ್ಕಿ ನೆನಗಡಲೆ ಎಳೆನೀರು ಅರಿಶಿನ ಕುಂಕುಮ ಪೂಜೆ ಸಾಮಾನು ಮತ್ತು ಕಡ್ಡಾಯವಾಗಿ ಬೇವಿನಸೊಪ್ಪು-ಇವುಗಳಿಂದ ಮಾರಮ್ಮನನ್ನು ಅರ್ಚಿಸುವುದಕ್ಕೆ ತಂಪುಕೊಡುವುದು ಎನ್ನುತ್ತಾರೆ. ಮಕ್ಕಳಿಗೆ ದಡಾರ, ಸೀತಾಳ ಸಿಡುಬು ಇವು ಆಗದಿರಲಿ ಎಂಬುದು ತಂಪು ಕೊಡುವುದರ ಉದ್ದೇಶ. ಅವು ಆದಾಗಲೂ ವಾಸಿಯಾದಮೇಲೆ ಐದನೆಯ ಅಥವಾ ಒಂಬತ್ತನೆಯ ದಿನ ತಂಪುಕೊಡುವ ಪರಿಪಾಠವಿದೆ.

ಸಿಡುಬಾದಾಗ ಮಕ್ಕಳು ಕಣ್ಣು ಬಿಡಲಾರದ ಸ್ಥಿತಿಯಲ್ಲಿದ್ದರೆ ನಿನಗೆ ಕಣ್ಣು ಕೊಡುವೆ ಎಂದು ಮಾರಮ್ಮನಿಗೆ ಹರಕು ಹೊರುವುದುಂಟು. ವಾಸಿಯಾದ ಮೇಲೆ ಕಣ್ಣಿನಾಕಾರದ ಬೆಳ್ಳಿಯ ತಗಡುಗಳನ್ನು ಒಯ್ದು ಮಾರಮ್ಮನ ಕಣ್ಣುಗಳ ಭಾಗದಲ್ಲಿ ಅವನ್ನು ಎಣ್ಣೆಯಿಂದ ಅಂಟಿಸಿ ಇಟ್ಟು ಪೂಜೆ ಮಾಡಿಸಿಕೊಂಡು ಬರುತ್ತಾರೆ.

ಜಾತ್ರೆ ಸಮಯದಲ್ಲಿ ಮಾರಿಗುಡಿ ಮುಂದೆ ಬೆಂಕಿಹಾಕಿ ತಮಟೆ ಬಡಿತದ ಗತ್ತಿಗೆ ವೃತ್ತಾಕಾರವಾಗಿ ಕುಣಿಯುವ ಪದ್ಧತಿ ಅಲ್ಲಲ್ಲಿ ಕಂಡುಬರುತ್ತದೆ. ಕುಣಿಯುವವರಿಗೆ ವಿಶ್ರಾಂತಿ ಕೊಡುವ ಸಲುವಾಗಿ ನಡುನಡುವೆ ವಿವಿಧ ವೇಷ ಹಾಕಿ ಜನ ಸಮೂಹವನ್ನು ರಂಜಿಸುವ ಕಾರ್ಯಕ್ರಮವೂ ಇರುತ್ತದೆ. ಹೀಗೆ ಇಡೀ ರಾತ್ರಿ ಕುಣಿಯುತ್ತಾರೆ.

`ಮಕ್ಕಳ ಮಾರಮ್ಮ ಎಂದು ಕರ್ನಾಟಕದಲ್ಲಿ ಅಲ್ಲಲ್ಲಿ ಕರೆಯುವ ರೂಢಿ ಬಂದದ್ದು ಮಾರಮ್ಮನನ್ನು ಕುರಿತ ಇನ್ನೊಂದು ಬಗೆಯ ಪದ್ಧತಿಯಿಂದ. ಮಕ್ಕಳ ಮಾರಮ್ಮ ಎಂಬ ದೇವತೆಯ ಮೂಲ ಗುಡಿ ಇರುವುದು ಈಗ ತಮಿಳುನಾಡಿಗೆ ಸೇರಿಹೋಗಿರುವ ಸತ್ಯಮಂಗಲದಲ್ಲಿ. ಅಲ್ಲಿಯ ಕೆಲವು ಕುಟುಂಬಗಳವರು ಪೆಟ್ಟಿಗೆ ಆಕಾರದ ಪುಟ್ಟ `ಗುಡಿ'ಯಲ್ಲಿ ಮಾರಮ್ಮನನ್ನು ಹೊತ್ತುಕೊಂಡು ಚಾವಟಿಯಿಂದ ಹೊಡೆದುಕೊಳ್ಳುತ್ತ ಉದಿಮೆ ಹಾಗೂ ತಮಟೆ ವಾದ್ಯಗಳನ್ನು ಬಾರಿಸುತ್ತ ಕುಟುಂಬ ಸಮೇತ ಊರೂರು ಅಲೆಯುತ್ತ ಹೊರಡುತ್ತಾರೆ. ಮಕ್ಕಳ ತಾಯಿ ಮಾರಮ್ಮ ಬಂದವಳೆ, ಮಕ್ಕಳಿರೋರೆಲ್ಲ ಕಾಣಿಕೆ ಕೊಡಿ, ಮಕ್ಕಳಿಗೆ ಸಿಡುಬು ದಡಾರ ಆಗದಂತೆ ತಾಯಿ ನೋಡಿಕೊಳ್ಳುತ್ತಾಳೆ ಎಂದು ಹೇಳುತ್ತ ಬರುತ್ತಾರೆ. ಬೀದಿ ಮಧ್ಯೆ ಪೆಟ್ಟಿಗೆ ಇಟ್ಟು ಕಾಣಿಕೆ ನಿರೀಕ್ಷಿಸುತ್ತಾರೆ. ಆಗ ಜನ ಅಕ್ಕಿ ಜೋಳ ಅಥವಾ ಅಂಥ ಯಾವುದಾದರೂ ಧಾನ್ಯ ಉಪ್ಪು ಮೆಣಸಿನಕಾಯಿ ಹುಣಿಸೆಹಣ್ಣು ಹಸಿಟ್ಟು ಇವುಗಳ ಜೊತೆಗೆ ಕಾಸು ಇಷ್ಟನ್ನು ಮೊರದಲ್ಲಿ ಇರಿಸಿಕೊಂಡು ಬಂದು ಗುಡಿಯ ಮುಂದೆ ಇಡುತ್ತಾರೆ. ಅದನ್ನೆಲ್ಲ ಅವರು ಪ್ರತ್ಯೇಕ ಚೀಲಗಳಿಗೆ ಹಾಕಿಕೊಂಡು, ದೇವರ ಭಂಡಾರ ಎಂದು ಹೇಳಿ ಬೇವಿನ ಸೊಪ್ಪನ್ನೂ ಅರಿಸಿನವನ್ನೂ ಪ್ರಸಾದವಾಗಿ ಮೊರದಲ್ಲಿ ಇಟ್ಟು ಕೊಡುತ್ತಾರೆ. ಈ ಸಂದರ್ಭದಲ್ಲಿ ಅವರು ಬಟ್ಟೆಯನ್ನೂ ಕೇಳುವುದುಂಟು. ಇದು ಊರೂರು ತಿರುಗುವ ಮಾರಿಯಾದ್ದರಿಂದ ಊರುಮಾರಿ ಎಂದೇ ಕರೆಯಲ್ಪಡುತ್ತದೆ.

ನಿರ್ದಿಷ್ಟ ಕಾಲದಲ್ಲಿ ಹೀಗೆ ಊರಾಡಲು ಹೊರಡುವ ಈ ಭಕ್ತರು ತಾಯಿ ಮಾರಮ್ಮನ ಹೆಸರಿನಲ್ಲಿ ಗಳಿಸುವ ಧಾನ್ಯದಿಂದಲೇ ಜೀವಿಸುತ್ತ ಮತ್ತೆ ನಿರ್ದಿಷ್ಟ ಸಂದರ್ಭಕ್ಕೆ ಸರಿಯಾಗಿ ಮೂಲ ನಿವಾಸವಾದ ಸತ್ಯಮಂಗಲಕ್ಕೆ ಹೋಗಿ ಮೂಲದೇವರಿಗೆ ಉಳಿದೆಲ್ಲವನ್ನೂ ಅರ್ಪಿಸುವಲ್ಲಿಗೆ ಅವರ ಕಾರ್ಯಕ್ರಮ ಮುಗಿಯುತ್ತದೆ.
(ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ